ಬಮ್ಮನಹಳ್ಳಿ ವೆಬ್ ಸೈಟ್ ಗೆ ಸುಸ್ವಾಗತ

ಹಾವೇರಿ ಜಿಲ್ಲೆ ಸಂಪೂರ್ಣ ಮಾಹಿತಿ ಲಭ್ಯವಿದೆ

ಹದಿಮೂರು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಹಾವೇರಿ ಜಿಲ್ಲೆಯಲ್ಲಿ ನಿಸರ್ಗ ಸಂಪತ್ತನ್ನು ಬಳಸಿಕೊಂಡು ಸಮಗ್ರವಾಗಿ ಅಭಿವೃದ್ಧಿ ಪಡಿಸುವ ಪ್ರಯತ್ನಗಳು ಅಷ್ಟಾಗಿ ನಡೆದಿಲ್ಲ. ಆದರೆ ಜಿಲ್ಲೆ ಸಾಹಿತ್ಯ, ಸಂಸ್ಕೃತಿ ಹಾಗೂ ಜಾನಪದ ಕಲೆಗಳಿಂದ ಸಮೃದ್ಧವಾಗಿದೆ.
 

 

ಪುರ ಸಿದ್ದೇಶ್ವರ ದೇವಸ್ಥಾನ
ಉತ್ತರ ಕರ್ನಾಟಕದ ಹೆಬ್ಬಾಗಿಲಂತಿರುವ ಹಾವೇರಿ ಜಿಲ್ಲೆ ದಾರ್ಶನಿಕರ ನಾಡು. ಅರೆ ಮಲೆನಾಡು, ಬಯಲುಸೀಮೆ ಹಾಗೂ ಅಪ್ಪಟ ಮಲೆನಾಡಿನ ಹವಾಗುಣ ಮತ್ತು ಸಂಸ್ಕೃತಿಯನ್ನು ಜಿಲ್ಲೆ ಮೈಗೂಡಿಸಿಕೊಂಡಿದೆ.

ಏಲಕ್ಕಿಯ ಕಂಪು, ಮೆಣಸಿನಕಾಯಿ ಘಾಟಿಗೆ ಜಿಲ್ಲೆ ಹೆಸರುವಾಸಿ. ಜಿಲ್ಲೆಯಲ್ಲಿ ಜಲ ಸಂಪನ್ಮೂಲಕ್ಕೆ ಬರವಿಲ್ಲ. ಆದರೆ ಅದನ್ನು ಬಳಸಿಕೊಳ್ಳುವ ಪ್ರಯತ್ನ ಅಷ್ಟಾಗಿ ನಡೆದಿಲ್ಲ. ಹೀಗಾಗಿ ಜಿಲ್ಲೆ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ.

ಉತ್ತರಕ್ಕೆ ಶಿಕ್ಷಣ ಕಾಶಿ ಎಂದೇ ಹೆಸರಾದ ಧಾರವಾಡ, ಪಶ್ಚಿಮಕ್ಕೆ ಮುದ್ರಣ ಕಾಶಿ ಗದಗ, ದಕ್ಷಿಣಕ್ಕೆ ದಟ್ಟ ಮಲೆನಾಡಿನ ಶಿವಮೊಗ್ಗ, ದಕ್ಷಿಣಕ್ಕೆ ಶ್ರಮ ಸಂಸ್ಕೃತಿಗೆ ಹೆಸರಾದ ದಾವಣಗೆರೆ, ಪೂರ್ವಕ್ಕೆ ಉತ್ತರ ಕನ್ನಡ ಜಿಲ್ಲೆಗಳ ಗಡಿಗಳಿಗೆ ಹೊಂದಿಕೊಂಡಿರುವ ಹಾವೇರಿ ಜಿಲ್ಲೆ 47,455 ಚದರ ಕಿ ಮೀ ವಿಸ್ತೀರ್ಣದಲ್ಲಿದೆ. ಏಳು ತಾಲ್ಲೂಕುಗಳಲ್ಲಿ ಎರಡು ನಗರ, ನಾಲ್ಕು ಪಟ್ಟಣಗಳಿವೆ. ತುಂಗಭದ್ರಾ, ವರದಾ, ಕುಮದ್ವತಿ ಹಾಗೂ ಧರ್ಮಾ ಎಂಬ ನಾಲ್ಕು ನದಿಗಳು ಜಿಲ್ಲೆಯಲ್ಲಿ ಹರಿಯುತ್ತವೆ. 


 
ಇತಿಹಾಸಪೂರ್ವ ಕಾಲದಿಂದಲೂ ಜಿಲ್ಲೆಯ ಭೂ ಪ್ರದೇಶದಲ್ಲಿ ಮಾನವ ನಾಗರಿಕತೆ ಹೆಜ್ಜೆ ಗುರುತುಗಳು ಕಾಣಸಿಗುತ್ತವೆ. ತುಂಗಭದ್ರಾ ಹಾಗೂ ವರದಾ ನದಿಗಳ ದಂಡೆ ಮೇಲೆ ಶಿಲಾಯುಗದ ಜನ ವಸತಿಯ ಕುರುಹುಗಳು ಸಿಕ್ಕಿವೆ. ಐತಿಹಾಸಿಕವಾಗಿ ಈಗಿನ ಜಿಲ್ಲಾ ಕೇಂದ್ರ ಹಾವೇರಿ ಹಾಗೂ ಇತರ ಆರು ತಾಲ್ಲೂಕುಗಳು ಹಿಂದೆಂದೂ ಒಂದು ಆಡಳಿತ ವ್ಯವಸ್ಥೆಗೆ ಒಳಪಟ್ಟಿರಲಿಲ್ಲ.

ಹಾವೇರಿಯು ಬಾಸವೂರು-180ರ ಕಂಪಣದಲ್ಲಿ, ರಾಣೆಬೆನ್ನೂರ ರಟ್ಟಿಹಳ್ಳಿ-70ರ ಕಂಪಣದಲ್ಲಿದ್ದ ಕುರುಹುಗಳಿವೆ. ಪಾವರಿ, ನಳಪುರಿ, ಹಾವರಿ ಎಂಬುದು ಹಾವೇರಿಯ ಪ್ರಾಚೀನ ಹೆಸರುಗಳು. 

ವಿಭಜನೆಪೂರ್ವ ಧಾರವಾಡ ಜಿಲ್ಲೆಯಲ್ಲಿ ತಾಲ್ಲೂಕು ಕೇಂದ್ರವಾಗಿದ್ದ ಹಾವೇರಿ 1997ರಲ್ಲಿ ಪ್ರತ್ಯೇಕ ಜಿಲ್ಲೆಯಾಗಿ ಪರಿವರ್ತನೆಯಾಯಿತು. ರಾಣೆಬೆನ್ನೂರ, ಹಿರೇಕೆರೂರ, ಹಾನಗಲ್ಲ, ಶಿಗ್ಗಾಂವ, ಸವಣೂರು ಹಾಗೂ ಬ್ಯಾಡಗಿ ತಾಲ್ಲೂಕುಗಳು ಸೇರಿ  ಜಿಲ್ಲೆ ಅಸ್ತಿತ್ವಕ್ಕೆ ಬಂತು. ಜಿಲ್ಲೆಯಾಗಿ ಹದಿಮೂರು ವರ್ಷಗಳು ಕಳೆದರೂ ಹಾವೇರಿ ಇನ್ನೂ ಬದಲಾವಣೆ ಕಂಡಿಲ್ಲ! 

ಬೇಸಾಯ ಜಿಲ್ಲೆಯ ಜನರ ಮೂಲ ಕಸುಬು. ಒಟ್ಟು 4,42,237 ಹೆಕ್ಟೆರ್ ಸಾಗುವಳಿ ಪ್ರದೇಶ ಜಿಲ್ಲೆಯಲ್ಲಿದೆ. ನಾಲ್ಕು ನದಿಗಳಿದ್ದರೂ 51,002 ಹೆಕ್ಟೆರ್ ಪ್ರದೇಶಕ್ಕೆ ಮಾತ್ರ ನೀರಾವರಿ ಸೌಲಭ್ಯವಿದೆ. ಸುಮಾರು ಇಪ್ಪತ್ತು ಏತ ನೀರಾವರಿ ಯೋಜನೆಗಳು ಇನ್ನೂ ಕಾಗದ ಮೇಲೆ ಉಳಿದಿವೆ. ತುಂಗಾ ಮೇಲ್ದಂಡೆ ಯೋಜನೆಯಿಂದ 50 ಸಾವಿರ ಎಕರೆ ಭೂಮಿಗೆ ನೀರು ಬಂದಿದೆ. ಈ ಯೋಜನೆ ಪೂರ್ಣವಾದರೆ ಜಿಲ್ಲೆಯ 1.90 ಲಕ್ಷ ಹೆಕ್ಟೆರ್ ಭೂಮಿ ನೀರಾವರಿಗೆ ಒಳಪಡಲಿದೆ.

ಮೆಣಸಿನಕಾಯಿ, ಹತ್ತಿ, ಬತ್ತ ಹಾಗೂ ಗೋವಿನಜೋಳ ಪ್ರಮುಖ ಬೆಳೆಗಳು. ಬ್ಯಾಡಗಿ ಮಾರುಕಟ್ಟೆ ಏಷ್ಯಾದ ಅತಿ ದೊಡ್ಡ ವೆುಣಸಿನಕಾಯಿ ಮಾರುಕಟ್ಟೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ರಾಣೆಬೆನ್ನೂರ ರಾಷ್ಟ್ರೀಯ ಮಟ್ಟದಲ್ಲಿ ಬೀಜೋತ್ಪಾದನೆಗೆ ಹೆಸರುವಾಸಿ.

ಸಾಂಸ್ಕೃತಿಕ ಹಿರಿಮೆ: ಬಂಕಾಪುರದ ಸಾಮಂತರಾಜ ಚಲ್ಲಕೇತನರು, ಗುತ್ತವೊಳಲಿನ ಗುತ್ತರು, ಹಾನಗಲ್ಲ ಹಾಗೂ ನೂರಂಬಾಡದ ಕದಂಬರು, ಸವಣೂರಿನ ನವಾಬರು ಜಿಲ್ಲೆಯ ಐತಿಹಾಸಿಕ ಹಿರಿಮೆ ಹೆಚ್ಚಿಸಿದ್ದಾರೆ. ಜಿಲ್ಲೆಯ ಕಲೆ, ಸಾಹಿತ್ಯ, ಸಂಸ್ಕೃತಿ, ಧರ್ಮ ಹಾಗೂ ಸ್ವಾತಂತ್ರ್ಯ ಹೋರಾಟಗಳು ರಾಜ್ಯವಷ್ಟೇ ಅಲ್ಲದೇ ದೇಶದ ಗಮನ ಸೆಳೆದಿವೆ. 

‘ಕುಲ, ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರು ಬಲ್ಲಿರಾ...’ ಎಂದು ಕೇಳಿದ ದಾಸ ಶ್ರೇಷ್ಠರಾದ ಕನಕದಾಸರು, ಕನ್ನಡದ ಕಬೀರರೆಂದೇ ಹೆಸರಾದ ಶಿಶುವಿನಾಳದ ಸಂತ ಷರೀಫರು, ಜಾತಿ ಹೀನನ ಮನೆಯ ಜ್ಯೋತಿ ತಾ ಹೀನವೇ? ಎಂದು ಪ್ರಶ್ನಿಸಿದ ಅಬಲೂರು ಗ್ರಾಮದ ತ್ರಿಪದಿ ಕವಿ ಸರ್ವಜ್ಞ, ಹನ್ನೆರಡನೇ ಶತಮಾನದ ಶರಣರಲ್ಲಿ ಒಬ್ಬರಾದ ಚೌಡದಾನಯ್ಯಪುರದ ಅಂಬಿಗರ ಚೌಡಯ್ಯ ಹಾಗೂ ಅಬಲೂರಿನ ಏಕಾಂತರಾಮಯ್ಯ ಜಿಲ್ಲೆಯ ದಾರ್ಶನಿಕ ಪರಂಪರೆಯನ್ನು ಶ್ರೀಮಂತಗೊಳಿಸಿದ್ದಾರೆ.

ಅಂಧರ ಬಾಳಿಗೆ ಬೆಳಕಾದ ಕಾಡಶೆಟ್ಟಿಕೊಪ್ಪದ ಪಂಚಾಕ್ಷರಿ ಗವಾಯಿಗಳು, ದೇವಗಿರಿಯಲ್ಲಿ ಜನಿಸಿದ ಗದುಗಿನ ಪುಣ್ಯಾಶ್ರಮದ ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳು, ಹಿಂದೂಸ್ತಾನಿ ಸಂಗೀತ ಸಾಮ್ರಾಜ್ಞೆ  ಡಾ.ಗಂಗೂಬಾಯಿ ಹಾನಗಲ್ಲ, ರಂಗ ಗೀತ ಗಾಯನಕ್ಕೆ ಹೆಸರಾದ ಸೋನುಬಾಯಿ ದೊಡ್ಡಮನಿ, ಜುಬೇದಾಬಾಯಿ ಸವಣೂರು, ಸೂತ್ರದ ಗೊಂಬೆಯಾಟದ ಅಂತರವಳ್ಳಿಯ ವೀರನಗೌಡರ, ಕನ್ನಡದ ದಾಸಯ್ಯ ಎಂದೇ ಖ್ಯಾತರಾದ ಶಾಂತಕವಿಗಳು ಹಾವೇರಿ ಜಿಲ್ಲೆಯವರು.

 ಮಹಾಕವಿ ಪಂಪನ ಗುರು ದೇವೇಂದ್ರ ಮುನಿ, ರನ್ನ, ಚಾವುಂಡರಾಯರ ಗುರುಗಳಾದ ಅಜಿತ  ಸೇನಾಚಾರ್ಯರು ಬಂಕಾಪುರದಲ್ಲಿ ವಾಸಿಸಿದ್ದವರು. ಕನ್ನಡ ಕಾದಂಬರಿ ಲೋಕದ ಪಿತಾಮಹ ಎಂದೇ ಹೆಸರಾದ ಗಳಗನಾಥರು ಜಿಲ್ಲೆಯ ಗಳಗನಾಥ ಗ್ರಾಮದವರು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿ ವಿನಾಯಕ ಕೃಷ್ಣ ಗೋಕಾಕರು ಸವಣೂರಿನವರು. 

ಆಧುನಿಕ ವಚನಕಾರ ಎಂದೇ ಹೆಸರಾದ ಡಾ.ಮಹಾದೇವ ಬಣಕಾರ, ಹಿರಿಯ ಪತ್ರಕರ್ತ  ಪಾಟೀಲ ಪುಟ್ಟಪ್ಪ, ಶರಣರ ವಚನಗಳನ್ನು ಸಂಶೋಧಿಸಿದ ಪ್ರೊ. ಸಿ. ಸಿ. ಬಸವನಾಳ, ಸಮಾಜ ಶಾಸ್ತ್ರಜ್ಞ ಡಾ. ಹಿರೇಮಲ್ಲೂರ ಈಶ್ವರನ್, ವಿಮರ್ಶಕ ಡಾ.ಜಿ.ಎಸ್.ಅಮೂರ, ಸು.ರಂ.ಯಕ್ಕುಂಡಿ, ಕವಿ ಚಂದ್ರಶೇಖರ ಪಾಟೀಲ(ಚಂಪಾ), ಲಾವಣಿಕಾರ ಸಮ್ಮದ್ ಸಾಹೇಬ ಅವರು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದವರು. 

ಜಿಲ್ಲೆ ಸ್ವಾತಂತ್ರ್ಯ ಹೋರಾಟಕ್ಕೆ ವಿಶಿಷ್ಟ ಕೊಡುಗೆ ನೀಡಿದೆ. ಗಾಂಧೀಜಿಯವರ ಕರ ನಿರಾಕರಣೆ ಚಳವಳಿಯಲ್ಲಿ ಪಾಲ್ಗೊಂಡು ಪೊಲೀಸರ ಗುಂಡೇಟಿಗೆ ಬಲಿಯಾದ ಹುತಾತ್ಮ ಮೈಲಾರ ಮಹಾದೇವ, ತಿರಕಪ್ಪ ಮಡಿವಾಳರ, ವೀರಯ್ಯ ಹಿರೇಮಠ, ಬಾಂಬ್ ಸ್ಫೋಟದಲ್ಲಿ ಪ್ರಾಣತ್ಯಾಗ ಮಾಡಿದ ಮೆಣಸಿನಹಾಳ ತಿಮ್ಮನಗೌಡರು, ಹೋರಾಟದಲ್ಲಿ ಒಂದು ಕೈಯನ್ನು ಕಳೆದುಕೊಂಡ ಸಂಗೂರ ಕರಿಯಪ್ಪ, ಸರದಾರ ವೀರನಗೌಡ್ರ, ನಾಗಮ್ಮ ಪಾಟೀಲ, ಕೆ.ಎಫ್.ಪಾಟೀಲ, ಪಂಚಾಕ್ಷರಯ್ಯ ವಳಸಂಗದ ಅವರು ಸ್ವಾತಂತ್ರ್ಯ ಹೋರಾಟದ ಅಧ್ಯಾಯಗಳಲ್ಲಿ ಚಿರಸ್ಥಾಯಿಯಾಗಿದ್ದಾರೆ.

ಕರ್ನಾಟಕ ಏಕೀಕರಣ ಹೋರಾಟದಲ್ಲಿ ಜಿಲ್ಲೆಯ ಹೊಸಮನಿ ಸಿದ್ದಪ್ಪ, ಗುದ್ಲೆಪ್ಪ ಹಳ್ಳಿಕೇರಿಯವರ ಹೋರಾಟ ಅನನ್ಯ. ಕರ್ನಾಟಕದ ಏಕೀಕರಣ ಶಿಲ್ಪಿ ಹಾಗೂ ರಾಜ್ಯದ ಮುಖ್ಯಮಂತ್ರಿಗಳಾಗಿ ಹೆಚ್ಚು ಕಾಲ ಅಧಿಕಾರ ನಡೆಸಿದ ದಿ.ಎಸ್.ನಿಜಲಿಂಗಪ್ಪ ಅವರು ಶಿಗ್ಗಾಂವ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಅಗಡಿ ಗ್ರಾಮದ ಎಲ್.ಜಿ.ಹಾವನೂರರು ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಸರ್ಕಾರಕ್ಕೆ ಸಲ್ಲಿಸಿದ ವರದಿ ಇಂದಿಗೂ ದೇಶದ ಸಾಮಾಜಿಕ ನ್ಯಾಯಕ್ಕೆ ದಾರಿ ದೀಪ. ದಕ್ಷಿಣ ಆಫ್ರಿಕಾದ ಸಂವಿಧಾನ ರಚನೆಯಲ್ಲಿ ಅವರು ಸಲಹೆ ನೀಡಿದರೆಂಬುದು ಜಿಲ್ಲೆಯ ಹೆಗ್ಗಳಿಕೆ.

ಆಧ್ಯಾತ್ಮ ಪರಂಪರೆ: ಮರಿ ಕಲ್ಯಾಣ ಎಂದೇ ಪ್ರಸಿದ್ಧಿ ಪಡೆದ ಹಾವೇರಿಯಲ್ಲಿ 64 ಮಠಗಳಿವೆ. ಅವುಗಳಲ್ಲಿ ಹುಕ್ಕೇರಿಮಠ, ಮುರುಘರಾಜೇಂದ್ರ ಮಠ, ಹೊಸಮಠ, ಸಿಂದಗಿಮಠ ಪ್ರಮುಖವಾದವು, ಕದರಮಂಡಲಗಿ ಕಾಂತೇಶ (ಆಂಜನೇಯ), ದೇವರಗುಡ್ಡದ ಮಾಲತೇಶ, ಅಗಡಿಯ ಚಿದಂಬರೇಶ್ವರ ಮಠ, ಹೊಸರಿತ್ತಿಯ ರಾಘವೇಂದ್ರ ಮಠ, ಹಾನಗಲ್ಲ ಕುಮಾರೇಶ್ವರ ಮಠ, ತಡಸದ ಗಾಯತ್ರಿ ತಪೋಭೂಮಿ, ಕಾಗಿನೆಲೆಯ ಆದಿ ಕೇಶವ, ಸವಣೂರಿನ ದೊಡ್ಡಹುಣಸೆ ಮಠ, ಬಂಕಾಪುರದ ಅರಳೆಲೆ ಮಠ ಧಾರ್ಮಿಕ ಜಾಗೃತಿಯಲ್ಲಿ ಈಗಲೂ ಪ್ರಮುಖ ಪಾತ್ರವಹಿಸುತ್ತಿವೆ.

1904ರಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಹುಟ್ಟುಹಾಕಿ ಒಂದು ಸಮುದಾಯದ ಸಂಘಟನೆಗೆ ಕಾರಣರಾದ ಹಾಗೂ ಬಾದಾಮಿ ತಾಲ್ಲೂಕಿನ ಶಿವಯೋಗ ಮಂದಿರದಲ್ಲಿ ವಿರಕ್ತ ಮಠಗಳ ವಟುಗಳ ತಯಾರಿಕಾ ಕೇಂದ್ರ ಸ್ಥಾಪಿಸಿದವರು ಹಾನಗಲ್ಲ ಕುಮಾರಸ್ವಾಮಿಗಳು. ಈ ಕಾರ್ಯಕ್ಕೆ ಹಾವೇರಿ ಹುಕ್ಕೇರಿಮಠದ ಶಿವಬಸವ ಶ್ರೀಗಳು ಸಾಥ್ ನೀಡಿದ್ದರು.

ಪ್ರಾಚೀನ ವಾಸ್ತುಶಿಲ್ಪ: ಜಿಲ್ಲೆ ಚಾಲುಕ್ಯ, ರಾಷ್ಟ್ರಕೂಟ, ಹೊಯ್ಸಳ ರಾಜ್ಯಭಾರಕ್ಕೆ ಒಳಪಟ್ಟ ಹಿನ್ನೆಲೆಯಲ್ಲಿ ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಪ್ರಾಚೀನ ದೇವಾಲಯಗಳಿವೆ. ಹಾವೇರಿಯ ಪುರಸಿದ್ದೇಶ್ವರ, ಗಳಗನಾಥದ ಗಳಗೇಶ್ವರ, ಹಾನಗಲ್ಲನ ತಾರಕೇಶ್ವರ, ಹರಳಹಳ್ಳಿಯ ಸೋಮೇಶ್ವರ, ಅಬಲೂರಿನ ಸೋಮೇಶ್ವರ, ರಟ್ಟಿಹಳ್ಳಿಯ ಕದಂಬೇಶ್ವರ, ಬಂಕಾಪುರದ ನಗರೇಶ್ವರ, ಚೌಡದಾನಯ್ಯಪುರದ ಮುಕ್ತೇಶ್ವರನ ದೇವಾಲಯಗಳು ಇಂದಿಗೂ ಶಿಲ್ಪ ಕಲೆಯ ವೈಭವಕ್ಕೆ ಕುರುಹುಗಳಾಗಿವೆ.

ಜಾನಪದ ಸಂಸ್ಕೃತಿ: ಜಿಲ್ಲೆಯಲ್ಲಿ ಶಿಷ್ಟ ಸಂಪ್ರದಾಯಕ್ಕಿಂತ ಜಾನಪದ ಸಂಸ್ಕೃತಿಯೇ ಹೆಚ್ಚಾಗಿ ಮೈದಾಳಿದೆ. ಲಂಬಾಣಿ, ಹಕ್ಕಿಪಿಕ್ಕಿ, ಕುರ್ರಮಾಮಾ (ರಾಮಕುಂಡಡಿ) ಮೇದರು, ದುರಗಮುರಗಿಯರು, ಹಗಲು ವೇಷಗಾರರು, ಸುಡುಗಾಡು ಸಿದ್ಧರು. ಕೊರಮರು ಸೇರಿದಂತೆ ಅನೇಕ ಬುಡಕಟ್ಟು ಜನಾಂಗಗಳಿವೆ. ಅವರ ಆಚಾರ, ವಿಚಾರ, ಜೀವನ ಶೈಲಿಗಳು ಜಿಲ್ಲೆಯ ಜಾನಪದ ಸಂಸ್ಕೃತಿಯನ್ನು ಜೀವಂತವಾಗಿಟ್ಟಿವೆ. 

ಹಾವನೂರಿನ ದ್ಯಾಮವ್ವನ ಜಾತ್ರೆ, ಖರ್ಜಗಿಯ ಭೂತಪ್ಪನಿಗೆ ಹೂರಣ ತಿಕ್ಕುವ ಜಾತ್ರೆ, ಕೊಳೂರು ಕೊಡಗೂಸಿನ ಜಾತ್ರೆಗಳು ಪ್ರಮುಖ ಜಾನಪದ ಜಾತ್ರೆಗಳಾಗಿದ್ದರೆ, ಹೋರಿಹಬ್ಬ ಜನಪದ ಕೃಷಿ ಕ್ರೀಡೆ.  ಹೋರಿ ಹಬ್ಬದಲ್ಲಿ ಎತ್ತುಗಳಿಗೆ ಗೆಜ್ಜೆ, ಝೂಲ, ಬಲೂನ್ ಕಟ್ಟಿ, ಕೊಬ್ರಿಗಳನ್ನು ಕೊಂಬುಗಳಿಗೆ ಕಟ್ಟಿ ಓಡಿಸಲಾಗುತ್ತದೆ. ಆದ್ದರಿಂದ ಇದನ್ನು ಕೊಬ್ರಿ ಹೋರಿ ಓಟವೆಂದು ಕರೆಯಲಾಗುತ್ತದೆ. ಇದು ಜಿಲ್ಲೆಯಾದ್ಯಂತ ದೀಪಾವಳಿ ನಂತರ ಶುರುವಾಗುತ್ತದೆ.

ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಹಾವೇರಿಯಲ್ಲಿ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದಾಗಿ ಮೂಲ ಸೌಕರ್ಯಗಳಿಲ್ಲ. ಜಿಲ್ಲಾಡಳಿತದ ಕಚೇರಿ ಹಾವೇರಿಯಿಂದ 8 ಕಿ.ಮೀ ದೂರದಲ್ಲಿದ್ದರೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಕಚೇರಿ ಇನ್ನೊಂದು (9 ಕಿಮೀ ದೂರ) ತುದಿಯಲ್ಲಿದೆ. ಅಭಿವೃದ್ಧಿ ಎನ್ನುವುದು ಮರೀಚಿಕೆಯಾಗಿದೆ.

 

 

Search site

shivanand.bh@gmail.com